ಅಭಿವ್ಯಕ್ತಿರೀತಿಯ ನಾಟಕ

	ಅಭಿವ್ಯಕ್ತಿವಾದದ ಶಿಶು. ಇದು ಆರಂಭವಾದುದು ಜರ್ಮನಿ, ಸ್ವೀಡನ್ ದೇಶಗಳಲ್ಲಿ; ಹಾಪ್ಪ್‍ಮನ್, ಸ್ಟ್ರಿಂಡ್‍ಬರ್ಗ್ ಮೊದಲಾದವರ ಕೃತಿಗಳಲ್ಲಿ. ಮನುಷ್ಯನ ಮನಸ್ಸಿನಲ್ಲಿ ಉದ್ಭವಿಸುವ ಭಾವಗಳನ್ನೂ ಆಲೋಚನೆಗಳನ್ನೂ ನಾಟಕಕಾರ ಆದಷ್ಟು ಪ್ರಾಮಾಣಿಕತೆಯಿಂದ ವ್ಯಕ್ತಪಡಿಸಬೇಕಾದುದು ಅಗತ್ಯವೆಂದು ಈ ವರ್ಗದ ನಾಟಕಕಾರರ ಮತ್ತು ನಾಟಕಪದ್ಧತಿಯ ಅಭಿಪ್ರಾಯ. ಇದರ ಫಲವಾಗಿ ಇಂಥ ಬರೆಹಗಳಲ್ಲಿ ಬರುವ ಸಂಭಾಷಣೆ ಥಟ್ಟನೆ ಹೊರಬೀಳುವ, ಪರಸ್ಪರ ಸಂಬಂಧವಿರಬೇಕಾಗಿಲ್ಲದ, ಆಲೋಚನೆಗಳ ಸ್ಫೋಟನೆಗನುಸಾರವಾಗಿ ಮಾತುಗಳಿಂದ ತುಂಬಿರುತ್ತದೆ. ಮಾತು ಮನಸ್ಸಿನ ಕನ್ನಡಿಯಾಗಿರುತ್ತದೆ. ಸಣ್ಣ ಸಣ್ಣ ದೃಶ್ಯಗಳು, ತುಂಡು ತುಂಡು ವಾಕ್ಯಗಳು, ಸಾಂಕೇತಿಕ ಪಾತ್ರಗಳು ಇಂಥ ನಾಟಕಗಳ ವೈಶಿಷ್ಟ್ಯ. ಮನಸ್ಸಿನ ಸ್ಥಿತಿಗೆ ಪ್ರಾಧಾನ್ಯವಿರುವುದರಿಂದ ವಾಸ್ತವಿಕ ದೃಶ್ಯಪರಿಕರಗಳಿಗೆ ಪ್ರಾಮುಖ್ಯತೆ ಕಡಿಮೆ. ಪಾತ್ರಗಳು ವಿವಿಧ ಶಕ್ತಿಗಳ, ಪ್ರವೃತ್ತಿಗಳ ಪ್ರತಿನಿಧಿಗಳಾಗುತ್ತವೆ; ನಾಟಕ ಭಾವನಾಮಯವಾಗುತ್ತದೆ. 						
     
(ಎಂ.ಆರ್.)

ಈ ನಾಟಕ ಪ್ರಕಾರದ ಪ್ರಥಮ ಪ್ರವರ್ತಕರು ಜರ್ಮನ್ ನಾಟಕಕಾರ ಫ್ರ್ಯಾಂಕ್ ವಾಡಕಿಂಟ್ ಮತ್ತು ಸ್ವೀಡನ್ನಿನ ಅಗಸ್ಟ್ ಸ್ಟಿಂಡ್‍ಬರ್ಗ್. ಈ ನಾಟಕಗಳು ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುತ್ತಿದ್ದವು. ಆದರೆ ಇವು ತೀರ ವ್ಯಕ್ತಿಕೇಂದ್ರಿತವಾದವು, ನಾಟಕಕಾರನೇ ತನ್ನ ನಾಟಕದ ನಾಯಕನೂ ಆಗುವ ಪ್ರವೃತ್ತಿ ಇವುಗಳಲ್ಲಿ ಕಾಣುತ್ತದೆ. 
                             
  
(ಪರಿಷ್ಕರಣೆ: ಪ್ರೊ.ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ